ಪಕ್ಕದ್ ಮನೆ ಆಂಟಿ ಮತ್ತು ಶನಿ ದೆಸೆ

ಆಫೀಸಿಂದ ಮನೆಗೆ ಬರ್ತಿದ್ದೆ. ನಮ್ಮ ಪಕ್ಕದ ಮನೆ ಆಂಟಿ ಆಚೆ ನಿಂತಿದ್ರು. ಅವರಿಗೆ ನಮ್ಮನ್ನು ಕಂಡ್ರೆ ತುಂಬ ಪ್ರೀತಿ. ಮನೇಲಿ ಎನಾದ್ರು ಹೊಸ ತಿಂಡಿ ಮಾಡಿದ್ರೆ ನಮಗೆ ತಪ್ಪದೆ ಕೊಡ್ತಾರೆ. ನಾನು ಹಾಗೇ ಅವರನ್ನ ಮಾತಾಡಿಸಿದೆ.

ನಾನು: ಏನ್ ಆಂಟಿ, ಈ ನಡುವೆ ನೀವು ಕಾಣೋದೇ ಇಲ್ಲ?

ಆಂಟಿ: ದಿನಾ ಸಂಜೆ ಪಾರ್ಕ್ ಗೆ ಹೋಗ್ತಿದೀನಿ. ಅಲ್ಲಿ ಲಾಫಿಂಗ್ ಕ್ಲಾಸ್ ನಡಿತಿದೆ. ಮಾತಾಡೋಕ್ಕೂ ತುಂಬಾ ಜನ ಸಿಗ್ತಾರೆ. ಓಹ್, ಅಂದಹಾಗೆ ನಿನ್ನ ಒಂದು ವಿಷಯ ಕೇಳ್ಬೇಕಿತ್ತು. ಇವತ್ತು ಆ ಆಚೆಬೀದಿ ಸುಂದರಮ್ಮ ಇದಾರಲ್ಲ ಅವರು ಒಂದು ವಾಟ್ಸ್ ಆಪ್ ಮೆಸೇಜ್ ತೋರ್ಸುದ್ರು. ಅವರ ಗುರೂಜಿ ಕಳ್ಸಿದ್ದಂತೆ. ತುಂಬಾ ಪವರ್ ಫುಲ್ ಗುರೂಜಿ ಅಂತೆ. ಟೀವಿಲೆಲ್ಲ ಬರ್ತಾರಂತೆ. ಅವರ ಪ್ರಕಾರ ನಾಳೆ ಸೂರ್ಯ ಶನಿಯ ಮನೆಗೆ ಹೋಗ್ತಿದ್ದಾನಂತೆ. ಅದರಿಂದ ಸೂರ್ಯನಿಗೆ ಶನಿದೆಸೆ ಅಂತೆ. ಅವರಿಬ್ರೂ ಹತ್ರ ಇರ್ಬಾರ್ದಂತೆ. ತುಂಬಾ ಕೆಟ್ಟ ದಿನ ಅಂತೆ. ಎಲ್ಲರಿಗೂ ಫಾರ್ವರ್ಡ್ ಮಾಡಿ ಅಂತ. ನೀನೂ ಅದೇನೋ ಆಕಾಶ ಎಲ್ಲಾ ನೋಡಿರ್ತ್ಯಲ್ಲ, ಇದೆಲ್ಲ ನಿಜಾನಾ?

ನಾನು: ಆಂಟಿ ನೀವು ಹೇಳ್ತಿರೋದು ಹೇಗಿದೆ ಅಂದ್ರೆ ಆಕಾಶದಲ್ಲಿ ಒಂದು ಬಿಗ್ ಬಾಸ್ ಶೋ ನಡೀತಿದೆ. ಸೂರ್ಯ ಮತ್ತು ಶನಿ ಇಬ್ರನ್ನೂ ಒಂದೇ ಮನೇಲಿ ಕೂಡಿ ಹಾಕಿದಾರೆ ಅಂತನಾ?

ಆಂಟಿ: ನೀನು ಸುಮ್ನೆ ತರ್ಲೆ ಮಾಡ್ಬೇಡಪ್ಪ. ಇದು ಸೀರಿಯಸ್ ವಿಚಾರ. ನಾಳೆ ನಮ್ಮ ಲಾಫಿಂಗ್ ಕ್ಲಾಸ್ ಕ್ಯಾನ್ಸಲ್ ಮಾಡ್ಬೇಕು ಅಂತ ಆ ಸುಂದರಮ್ಮ ಹೇಳ್ತಿದಾರೆ. ವಾಟ್ಸ್ ಆಪ್ ಗ್ರೂಪ್ ನಲ್ಲಿ ಡಿಸ್ಕಶನ್ ನಡೀತಿದೆ.

ನಾನು: ಸರಿ ಆಂಟಿ. ಇಲ್ಲಿ ಕೇಳಿ. ಸೂರ್ಯನ ಸುತ್ತ ಎಲ್ಲ ಗ್ರಹಗಳೂ ತಿರುಗುತ್ತಿರೋ ವಿಚಾರ ನಿಮಗೆ ಗೊತ್ತು ತಾನೆ? ಹೀಗೇ ತಿರುಗುತ್ತಾ, ಶನಿ ಮತ್ತು ಭೂಮಿ ಸೂರ್ಯನ ವಿರುದ್ಧ ದಿಕ್ಕಿಗೆ ಬಂದಿವೆ. ಆದ್ದರಿಂದ ನಮ್ಮ ಭೂಮಿಯಿಂದ ನೋಡಿದಾಗ ಈ ಎರಡೂ ಈಗ ಧನುರ್ ರಾಶಿಯ ಕಡೆ ಕಾಣ್ತಿವೆ. ಚಿತ್ರದಲ್ಲಿ ನೋಡಿ. ಮಧ್ಯದಲ್ಲಿ ಹೊಳಿತಾ ಇರೋದು ಸೂರ್ಯ. ಅದರ ಪಕ್ಕದಲ್ಲಿ ಚಿಕ್ಕದಾಗಿರೋದು ಶನಿ ಗ್ರಹ. ಎರಡೂ ಇರೋದು Sagittarius ರಾಶಿಯಲ್ಲೇ.

ಆಂಟಿ: ಓಹ್, ಹಾಗಾದ್ರೆ ಗುರೂಜಿ ಹೇಳಿದ್ದು ನಿಜ. ಸೂರ್ಯ ಮತ್ತು ಶನಿ ಅಷ್ಟು ಹತ್ರ ಇದ್ರೆ ಜಗಳ ಗ್ಯಾರಂಟಿ.

ನಾನು: ಅಯ್ಯೋ ಅಷ್ಟೊಂದ್ ಟೆನ್ಷನ್ ಮಾಡ್ಕೊಬೇಡಿ ಆಂಟಿ. ಈ ಕೆಳಗಿನ ಚಿತ್ರ ನೋಡಿ. ಭೂಮಿ ಇರೋದು ಸೂರ್ಯನ ಬಲಭಾಗಕ್ಕೆ. ಶನಿ ಇರೋದು ಎಡ ಭಾಗಕ್ಕೆ. ಭೂಮಿಯಿಂದ ಸೂರ್ಯನ ಕಡೆ ಒಂದು ರೇಖೆ ಎಳೆದು ಅದನ್ನೇ ಇನ್ನೂ ಉದ್ದ ಮಾಡ್ತ ಹೋದ್ರೆ ನಮಗೆ ಶನಿ ಸಿಗತ್ತೆ. ಅಲ್ಲಿಂದ ಮುಂದೆ Sagittarius ಅಂದ್ರೆ ಧನುರ್ ರಾಶಿ ಸಿಗತ್ತೆ. ಅದಕ್ಕೇ ಸೂರ್ಯ ಮತ್ತು ಶನಿ ಭೂಮಿಯಿಂದ ನೋಡಕ್ಕೆ ಧನು ರಾಶಿಯಲ್ಲಿ ಒಟ್ಟಿಗೆ ಕಾಣ್ತಿರೋದು. ವಾಸ್ತವದಲ್ಲಿ ಸೂರ್ಯನಿಗೂ ಶನಿಗೂ ಇರೋ ದೂರ ೧೫೦೫ ದಶಲಕ್ಷ ಕಿಲೋ ಮೀಟರುಗಳು. ಹಾಗೆ ನೋಡಕ್ಕೆ ಹೋದ್ರೆ ನಮ್ಮ ಭೂಮಿನೇ ಸೂರ್ಯನಿಗೆ ಹತ್ತಿರ ಇರೋದು (೧೫೦ ದಶಲಕ್ಷ ಕಿಲೋ ಮೀಟರು).

ಅಂದಹಾಗೇ ಸೂರ್ಯ ಮತ್ತು ಶನಿ ಒಂದೇ ಮನೇಲಿರೋದು ಅಪರೂಪದ ವಿಷಯ ಏನಲ್ಲ. ಪ್ರತಿ ವರ್ಷ ಒಂದು ತಿಂಗಳು ಸೂರ್ಯ ಶನಿಯ ಮನೆಯಲ್ಲೇ ಇರ್ತಾನೆ.

ಆಂಟಿ: ಹಾಗಾದ್ರೆ ಸರಿ ಬಿಡಪ್ಪ. ಒಟ್ಟ್ನಲ್ಲಿ ನಾಳೆ ಏನೂ ಗಂಡಾಂತರ ಅಂತೂ ಇಲ್ಲ. ಸದ್ಯ, ನಾಳೆ ಲಾಫಿಂಗ್ ಕ್ಲಾಸ್ ಕ್ಯಾನ್ಸಲ್ ಅಂತೂ ಆಗಲ್ಲ. ಆರಾಮಾಗಿ ಪುಟ್ಟ ಗೌರಿ ಮದುವೆ, ಅಗ್ನಿಸಾಕ್ಷಿ ಬಗ್ಗೆ ಡಿಸ್ಕಸ್ ಮಾಡಬಹುದು….

(ಮುಂದಿನ ದಿನ)

ನಾನು (ಬಸ್ ನಲ್ಲಿ ಕುಳಿತು): ಇವತ್ತ್ಯಾಕೆ ಇಷ್ಟೊಂದು ಟ್ರಾಫಿಕ್ ಇದೆ? ೩ ಗಂಟೆಯಿಂದ ಬಸ್ ಮುಂದೇನೇ ಹೋಗ್ತಿಲ್ವಲ್ಲ?

ಪಕ್ಕದಲ್ಲಿದ್ದವರು: ಥೂ, ಅದೇನೋ ವೈಟ್ ಟಾಪಿಂಗ್ ಅಂತೆ. ರಿಂಗ್ ರೋಡ್ ಫುಲ್ ಜಾಮ್. ಇವತ್ತು ನಾವು ಮನೆಗೆ ಹೋಗೋದು ಡೌಟೇ. ಒಳ್ಳೆ ಶನಿ ಕಾಟ ಆಯ್ತು ಇದು…

ನಾನು: 😮

4 Replies to “ಪಕ್ಕದ್ ಮನೆ ಆಂಟಿ ಮತ್ತು ಶನಿ ದೆಸೆ”

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *